ಕಂಠೀರವ ನರಸರಾಜ 1 : ಆಳ್ವಿಕೆ : 1638-59, ಮೈಸೂರು ಒಡೆಯರ ಸಂತತಿಯ ಹೆಸರಾಂತ ರಾಜರಲ್ಲಿ ಒಬ್ಬ. ಬೆಟ್ಟದ ಚಾಮರಾಜ ಒಡೆಯನ ಮಗ. ಬೋಳ ಚಾಮರಾಜನ ಅನಂತರ ಬೆಟ್ಟದ ಚಾಮರಾಜನೇ ಸಿಂಹಾಸನಕ್ಕೆ ಬಂದಿದ್ದರೂ ಆಡಳಿತ ಸಾಮಥರ್ಯ್‌ದ ಅಭಾವದಿಂದಾಗಿ ತನ್ನ ತಮ್ಮನಾದ ರಾಜ ಒಡೆಯನಿಗೆ ಅಧಿಕಾರ ಬಿಟ್ಟುಕೊಟ್ಟಿದ್ದ. ಅವನ ಅನಂತರ ಸಿಂಹಾಸನವನ್ನೇರಿದ ಇಮ್ಮಡಿ ರಾಜ ಒಡೆಯ ವಿಷಪ್ರಾಶನದಿಂದ ಕೊಲೆಗೀಡಾದಾಗ ಪಟ್ಟಕ್ಕೆ ಬಂದವನೇ ಒಂದನೆಯ ಕಂಠೀರವ ನರಸರಾಜ. ಈತನೂ ಇವನ ತಂದೆಯಂತೆಯೇ ಅಸಮರ್ಥನೆಂದೂ ಇದರಿಂದ ತನ್ನ ಹಾದಿ ಸುಗಮವಾದೀತೆಂದೂ ಇಮ್ಮಡಿ ರಾಜ ಒಡೆಯನನ್ನು ಕೊಲೆ ಮಾಡಿಸಿದ ದಳವಾಯಿ ವಿಕ್ರಮರಾಯನ ಭಾವನೆಯಾಗಿತ್ತು. ಆದರೆ ಈ ನಿರೀಕ್ಷೆ ಸುಳ್ಳಾಯಿತು. ಕಂಠೀರವ ನರಸರಾಜ ಅಜ್ಞಾತನಾಗಿದ್ದಾಗಲೇ ತನ್ನ ಪರಾಕ್ರಮವನ್ನು ಮೆರೆದಿದ್ದ. ತಿರುಚಿನಾಪಳ್ಳಿಯ ಜಟ್ಟಿಯೊಂದಿಗೆ ಕಾದಾಡಿ ಅವನನ್ನು ಸೋಲಿಸಿ ಕೊಂದು ಅಲ್ಲಿಯ ರಾಜನ ಯಾವ ಮರ್ಯಾದೆಯನ್ನೂ ಸ್ವೀಕರಿಸದೆ ಗುಟ್ಟಾಗಿ ಹಿಂತಿರುಗಿದ್ದನೆಂಬುದಾಗಿ ಖ್ಯಾತಿ ಗಳಿಸಿದ್ದ. ಈತ ಸಿಂಹಾಸನವನ್ನೇರಿದ ಕೂಡಲೇ ದಳವಾಯಿ ವಿಕ್ರಮರಾಯನನ್ನು ಕೊಲ್ಲಿಸಿ ಪುರ್ಣ ಅಧಿಕಾರವಹಿಸಿಕೊಂಡ. ಆ ವೇಳೆಗೆ ವಿಜಯನಗರದ ಅಧಿಕಾರ ಕ್ಷೀಣಿಸಿ, ಬಿಜಾಪುರದ ಸುಲ್ತಾನನೂ ಮೊಗಲರೂ ಕನ್ನಡನಾಡಿನ ಮೇಲೆ ತಮ್ಮ ಅಧಿಕಾರ ಸ್ಥಾಪಿಸುವ ಹವಣಿಕೆಯಲ್ಲಿದ್ದರು. ಬಿಜಾಪುರದ ಸುಲ್ತಾನ ಪ್ರಸಿದ್ಧ ದಳಪತಿಯಾದ ರಣದುಲ್ಲಾಖಾನನ ನೇತೃತ್ವದಲ್ಲಿ ಶ್ರೀರಂಗಪಟ್ಟಣವನ್ನು ಮುತ್ತಲು ಒಂದು ಸೈನ್ಯವನ್ನು ಕಳುಹಿಸಿದ. ಕಂಠೀರವ ನರಸರಾಜ ಒಡೆಯ ಪರಾಕ್ರಮದಿಂದ ಹೋರಾಡಿ ಅವನನ್ನು ಸೋಲಿಸಿ ಹಿಂತಿರುಗುವಂತೆ ಮಾಡಿದ.
ಅನಂತರ ಈತ ದಕ್ಷಿಣದ ಜಿಲ್ಲೆಗಳ ಮೇಲೆ ದಂಡೆತ್ತಿಹೋಗಿ ಮಧುರೆಯ ನಾಯಕನನ್ನು ಸೋಲಿಸಿ ಸತ್ಯಮಂಗಲವನ್ನೂ ಡಣ್ಣಾಯಕನ ಕೋಟೆಯನ್ನೂ ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಪೆರಿಯಪಟ್ಟಣ ಮತ್ತು ಇಕ್ಕೇರಿಯ ಪಾಳೆಯಗಾರರೂ ಇವನಿಗೆ ಸೋತರು. ಮೂಗುಗಳಿಗಾಗಿ ಮಾಡಿದ ಯದ್ಧವೆಂದು ಇದನ್ನು ಪ್ರೋನೇಜ ಎಂಬ ಪಾದ್ರಿ ವರ್ಣಿಸಿದ್ದಾನೆ. ಎದುರಾಳಿಗಳ ಮೂಗುಗಳನ್ನು ಕತ್ತರಿಸಬೇಕೆಂದು ಕಂಠೀರವ ನರಸರಾಜ ಆಜ್ಞೆಯಿತ್ತನೆಂಬುದಾಗಿ ಆತನ ಅಭಿಪ್ರಾಯ. ತನ್ನ ಸ್ವಾಮಿಯ ವಿರುದ್ಧ ಬಂಡಾಯವೆದ್ದ ದ್ರೋಹಿಯೆಂದು ತಿರುಮಲನಿಗೆ ಈ ಶಿಕ್ಷೆಯನ್ನು ಕಂಠೀರವ ನರಸರಾಜ ವಿಧಿಸಿದ್ದ, ವಿಶ್ವಾಸಘಾತಕರಿಗೆ ಈ ಬಗೆಯ ಶಿಕ್ಷೆ ನೀಡುವುದು ಆಗ ಸಾಮಾನ್ಯವಾಗಿತ್ತು. ನರಸರಾಜನ ರಾಜ್ಯ ಕೊಡಗಿನ ಗಡಿ ಮತ್ತು ಹಾಸನ ಜಿಲ್ಲೆಗಳವರೆಗೂ ವಿಸ್ತಾರವಾಯಿತು. ನಾಗಮಂಗಲದಲ್ಲಿ ಅಧಿಕಾರ ನಡೆಸುತ್ತಿದ್ದ ದೊಡ್ಡಯ್ಯ ಇವನ ವಿರುದ್ಧವಾಗಿ ಒಳಗೊಳಗೆ ಪಿತೂರಿ ನಡೆಸುತ್ತಿದ್ದನೆಂಬುದು ಗೊತ್ತಾಗಿ ಅವನನ್ನು ಶಿಕ್ಷಿಸಿದ. ಮಾಗಡಿ ಕೆಂಪೇಗೌಡನನ್ನು ಯಲಹಂಕದ ಬಳಿ ಸೋಲಿಸಿ ಅವನಿಂದಲೂ ಕಪ್ಪ ವಸೂಲು ಮಾಡಿದ. ವಿಜಯನಗರದ ಶ್ರೀರಂಗರಾಯನಿಗೆ ಬೇಲೂರಿನಲ್ಲಿ ನರಸರಾಜನ ಆಶ್ರಯ ದೊರಕಿತು. ವಿಜಯನಗರದ ನಾಮಪತ್ರ ಸಾರ್ವಭೌಮತ್ವ ಸಂಪುರ್ಣ ನಶಿಸಿಹೋಗುವ ಸ್ಥಿತಿಯಲ್ಲಿದ್ದುದನ್ನು ಮನಗಂಡ ಕಂಠೀರವ ನರಸರಾಜ ಆ ಸಮಯಕ್ಕೆ ಸರಿಯಾಗಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ. ಇದರ ಸಂಕೇತವಾಗಿ ಶ್ರೀರಂಗಪಟ್ಟಣದಲ್ಲಿ ಟಂಕಸಾಲೆಯನ್ನು ಸ್ಥಾಪಿಸಿದನಲ್ಲದೆ ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಅಚ್ಚು ಹಾಕಿಸಿದ. ಇವಕ್ಕೆ ಕಂಠೀರಾಯಹಣ ಎಂದು ಹೆಸರು. ಕಂಠೀರಾಯ ಎಂಬ ಕನ್ನಡ ಅಕ್ಷರಗಳು ನಾಣ್ಯಗಳ ಮೇಲಿವೆ. ಈ ನಾಣ್ಯಗಳು ಹೈದರ್ ಮತ್ತು ಟಿಪ್ಪು ಅಧಿಕಾರಕ್ಕೆ ಬರುವವರೆಗೂ ಚಲಾವಣೆಯಲ್ಲಿದ್ದುವು.

ಜನರಿಗೆ ಕಿರುಕುಳ ಕೊಡುತ್ತಿದ್ದ ಶ್ರೀಮಂತರನ್ನೂ ದುಷ್ಟರನ್ನೂ ಈತ ಸೂಕ್ತರೀತಿಯಲ್ಲಿ ಶಿಕ್ಷಿಸಿದ. ಆಡಳಿತ ಸುಧಾರಣೆ ಮಾಡಿ, ತೆರಿಗೆ ವಸೂಲಿಯನ್ನು ಬಿಗಿಗೊಳಿಸಿದ್ದರಿಂದ ಬೊಕ್ಕಸಕ್ಕೆ ಹೆಚ್ಚು ಹಣ ಬಂತು. ಇದರಿಂದ ಶ್ರೀರಂಗಪಟ್ಟಣದ ಕೋಟೆಯನ್ನು ವಿಸ್ತರಿಸಿ ಭದ್ರಪಡಿಸಲಾಯಿತು. ಅಲ್ಲಿ ನರಸಿಂಹ ದೇವಾಲಯವನ್ನು ಕಟ್ಟಿಸಿದವನೀತನೇ. ಈ ದೇವಾಲಯದಲ್ಲಿ ಕಂಠೀರವ ನರಸರಾಜನ ಪ್ರತಿಮೆಯನ್ನು ಕಡೆದು ನಿಲ್ಲಿಸಲಾಗಿದೆ. ಲಕ್ಷ್ಮೀನರಸಿಂಹದೇವರ ಪ್ರೀತ್ಯರ್ಥವಾಗಿ ಏಕಾದಶಿ ವ್ರತ ವಿಜೃಂಭಣೆಯಿಂದ ನಡೆಯುವಂತೆ ಈತ ಏರ್ಪಾಡು ಮಾಡಿದನೆಂದು ಪ್ರತೀತಿಯಿದೆ. ಈತ ಕೃಷ್ಣನ ಅವತಾರವೆಂದು ಹೊಗಳಿರುವ ಒಂದು ಶಾಸನವೂ ಉಂಟು. ಈತ ಅನೇಕ ಅಗ್ರಹಾರಗಳನ್ನು ಕಟ್ಟಿಸಿ ದಾನದತ್ತಿಗಳನ್ನು ಕೊಟ್ಟ. ಆರನೆಯ ಚಾಮರಾಜ ಒಡೆಯರಿಗೆ ಬಂಗಾರದೊಡ್ಡಿ ಎಂಬ ಮೆಚ್ಚಿನ ಪ್ರೇಯಸಿಯಿದ್ದಳೆಂದೂ ಅವಳ ಜ್ಞಾಪಕಾರ್ಥವಾಗಿ ಕಂಠೀರವ ನರಸರಾಜ ಶ್ರೀರಂಗಪಟ್ಟಣದ ಬಳಿಯ ಬಂಗಾರದೊಡ್ಡಿ ನಾಲೆಯನ್ನು ನಿರ್ಮಿಸಿದನೆಂದೂ ಹೇಳುತ್ತಾರೆ. ದಳವಾಯಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಈತ ಸೂಕ್ತಕ್ರಮ ಕೈಗೊಂಡನಲ್ಲದೆ, ಯಾವೊಬ್ಬ ದಳವಾಯಿಯೂ ಹೆಚ್ಚು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯದಂತೆ ಎಚ್ಚರಿಕೆ ವಹಿಸಿದ. ಇವನ 20 ವರ್ಷಗಳ ಆಳ್ವಿಕೆಯ ಕಾಲದಲ್ಲಿ ಸು. 10 ಜನ ದಳವಾಯಿಗಳು ಅಧಿಕಾರದಲ್ಲಿದ್ದು ಹೋದರು.

ಕಂಠೀರವ ನರಸರಾಜ ವಿದ್ವಾಂಸರಿಗೂ ಕವಿಗಳಿಗೂ ಪ್ರೋತ್ಸಾಹ ನೀಡುತ್ತಿದ್ದ, ಭಾಸ್ಕರ ವಿರಚಿತ ಬೇಹಾರ ಗಣಿತ, ತಿಮ್ಮರಸಕವಿಯ ಮಾರ್ಕಂಡೇಯ ರಾಮಾಯಣ, ಗೋವಿಂದ ವೈದ್ಯನ ನರಸರಾಜವಿಜಯ-ಇವು ಈತನ ಕಾಲದಲ್ಲಿ ರಚಿತವಾದ ಕೆಲವು ಗ್ರಂಥಗಳು. ನರಸರಾಜವಿಜಯ ಆಗಿನ ಇತಿಹಾಸಕ್ಕೆ ಒಂದು ಆಕರ ಗ್ರಂಥ. ಅನೇಕ ಶಾಸನಗಳಲ್ಲಿ ಕಂಠೀರವ ನರಸರಾಜನ ಸಾಹಸ ಪರಾಕ್ರಮಗಳ ವರ್ಣನೆಯುಂಟು. ಈತ ರಣಧೀರ ಕಂಠೀರವ ಎಂದೂ ಪ್ರಸಿದ್ಧನಾಗಿದ್ದಾನೆ. ಕಂಠೀರವ ನರಸರಾಜ 1659ರಲ್ಲಿ ಕಾಲವಾದ. ಇವನಿಗೆ ಮಕ್ಕಳಿರಲಿಲ್ಲ.	(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ